ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಮತ್ತು ಹೆರಕಲ್ ಗ್ರಾಮಗಳಲ್ಲಿರುವ ಉದ್ದೇಶಿತ ಯೋಜನಾ ಸ್ಥಳಗಳ ಕಾರ್ಯಸಾಧ್ಯತೆ ಕುರಿತು ಕೆಎಂಬಿ ಸಿಇಒ ಜಯರಾಮ್ ರಾಯ್ ಪುರ ಪರಿಶೀಲನೆ ಮಾಡಿದರು.
ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಸಾಗರಮಾಲ ಯೋಜನೆಯಡಿ ಪ್ರವಾಸೋದ್ಯಮ ಪೂರಕವಾಗಿ ಮತ್ತು ಸ್ಥಳೀಯ ಜನರಿಗೆ ಅನುಕೂಲವಾಗುವ ಆಲಮಟ್ಟಿ, ಹೆರಕಲ್ ಗ್ರಾಮಗಳಲ್ಲಿರುವ ಉದ್ದೇಶಿತ ಯೋಜನೆ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ರಾಯ್ ಪುರ ತಿಳಿಸಿದರು.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಮತ್ತು ಹೆರಕಲ್ ಗ್ರಾಮಗಳಲ್ಲಿರುವ ಉದ್ದೇಶಿತ ಯೋಜನಾ ಸ್ಥಳಗಳ ಕಾರ್ಯಸಾಧ್ಯತೆ, ಯೋಜನೆ ಭೂಸ್ವಾಧೀನ ಮತ್ತು ಜಲಸಾರಿಗೆ ಉಪಯುಕ್ತತೆ ಬಗ್ಗೆ ಪರಿಶೀಲನೆ ಹಾಗೂ ಆಲಮಟ್ಟಿ ಆಣೆಕಟ್ಟಿನ ಕೆಳಭಾಗದಲ್ಲಿರುವ 25 ಎಕರೆ ಜಮೀನಿನಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೀನು ಸಾಕಾಣಿಕೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿರುವ ಜಲಮಾರ್ಗದ ಮುಖಾಂತರ ಪ್ರವಾಸೋದ್ಯಮ ಅಭಿವೃದ್ಧಿಪಡಿಸಿದಲ್ಲಿ ಸ್ಥಳೀಯ ಜನರಿಗೆ ವಿವಿಧ ಆರ್ಥಿಕವಾಗಿ ಪ್ರಯೋಜನ ಪಡೆದುಕೊಳ್ಳ ಬಹುದಾಗಿದೆ. ಹೆಚ್ಚಿನ ಸಂಖ್ಯೆ ಪ್ರವಾಸಿಗರ ಗಮನ ಸೆಳೆದು ನೀರು ಆಧಾರಿತ ಕ್ರೀಡೆ ಅನುಭವಿಸುವ ಅವಕಾಶಗಳನ್ನು ಒದಗಿಸಿ ಪ್ರವಾಸೋದ್ಯಮ ಚಟುವಟಿಕೆಗಳು ಅಭಿವೃದ್ಧಿಯಾಗಲಿದೆ ಎಂದು ಜಯರಾಮ್ ತಿಳಿಸಿದರು.
ಈ ಪ್ರದೇಶದಲ್ಲಿ ದೋಣಿ/ನೌಕೆ ನಿರ್ಮಾಣ, ಬೋಟ್ ಯಾರ್ಡಗಳು ಹಾಗೂ ಸಂಬಂಧಿತ ಉಪಕರಣಗಳ ತಯಾರಿಕೆ ಮುಂತಾದ ಇತರ ಬೆಂಬಲದೊಂದಿಗೆ ಉದ್ಯಮ ತೆರೆಯುವ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುವಿಕೆಯಲ್ಲಿ ನೆರವಾಗಲಿದೆ ಎಂದರು. ಸುತ್ತ ಮುತ್ತಲಿನ ಜಿಲ್ಲೆಯಲ್ಲಿರುವ ಪ್ರವಾಸ ತಾಣಗಳು ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿದ್ದು, ಜಲಮಾರ್ಗದ ಅಭಿವೃದ್ಧಿಗೆ ಮೂಲಸೌಕರ್ಯ ಒದಗಿಸಿದ್ದಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆ ಪ್ರವಾಸಿಗರನ್ನು ಆಕರ್ಷಿಸಿ ಸರ್ಕಾರಕ್ಕೆ ಆದಾಯ ಗಳಿಸಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷ್ಣಭಾಗ್ಯ ಜಲ ನಿಗಮ ನಿಯಮಿತ ಅಧೀಕ್ಷಕ ಎಂಜಿನಿಯರ್ ಹಿರೇಗೌಡರ, ಕಾರ್ಯಪಾಲಕ ಎಂಜಿನಿಯರ್ ದೊಡ್ಡಮನಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಲವಾದಿ, ಕರ್ನಾಟಕ ಜಲಸಾರಿಗೆ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಾಂಡುರಂಗ, ಕುಲಕರ್ಣಿ ಸೇರಿದಂತೆ ಮತ್ತಿತ್ತರು ಇದ್ದರು.
ನದಿ ತೀರದಲ್ಲಿ ಜಲಮಾರ್ಗದ ಮುಖಾಂತರ ಪ್ರವಾಸೋದ್ಯಮ ಅಭಿವೃದ್ಧಿಪಡಿಸಿದ್ದಲ್ಲಿ ಹೆಚ್ಚಿನ ಸಂಖ್ಯೆ ಪ್ರವಾಸಿಗರ ಗಮನ ಸೆಳೆಯಬಹುದು. ಜೊತೆಗೆ ಸ್ಥಳೀಯರು ವಿವಿಧ ಆರ್ಥಿಕ ಪ್ರಯೋಜನಗಳು ಪಡೆದುಕೊಳ್ಳಬಹುದು. ನೀರು ಆಧಾರಿತ ಕ್ರೀಡೆಗಳನ್ನು ಅನುಭವಿಸುವ ಅವಕಾಶಗಳನ್ನು ಒದಗಿಸಿ ಪ್ರವಾಸೋದ್ಯಮ ಚಟುವಟಿಕೆಗಳು ಅಭಿವೃದ್ಧಿಯಾಗಲಿದೆ.
ಜಯರಾಮ್ ರಾಯ್ ಪುರ, ಕರ್ನಾಟಕ ಜಲಸಾರಿಗೆ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ