ಎಲ್ಲವೂ ಅಂದುಕೊಂಡಂತೆ ನಡೆದರೆ ಕೇರಳದ ಕೊಚ್ಚಿ ಮಾದರಿಯಲ್ಲಿ ಮಂಗಳೂರಿನಲ್ಲಿಯೂ ವಾಟರ್ ಮೆಟ್ರೊ ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ. ಕಳೆದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದಂತೆ ಕರ್ನಾಟಕ ಮಾರಿಟೈಮ್ ಬೋರ್ಡ್ (ಕೆಎಂಬಿ) ಮಂಗಳೂರಿನಲ್ಲಿ ವಾಟರ್ ಮೆಟ್ರೋ ಯೋಜನೆಗೆ ಡಿಪಿಆರ್ ಸಿದ್ಧಪಡಿಸುತ್ತಿದೆ.
ಮಂಗಳೂರು, ನ.5: ಎಲ್ಲವೂ ಅಂದುಕೊಂಡಂತೆ ನಡೆದರೆ, ಕೇರಳದ ಕೊಚ್ಚಿಯ ಮಾದರಿಯಲ್ಲಿ ಮಂಗಳೂರಿನಲ್ಲಿಯೂ ವಾಟರ್ ಮೆಟ್ರೋ ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ. ಕಳೆದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದಂತೆ ಕರ್ನಾಟಕ ಮಾರಿಟೈಮ್ ಬೋರ್ಡ್ (ಕೆಎಂಬಿ) ಮಂಗಳೂರಿನಲ್ಲಿ ವಾಟರ್ ಮೆಟ್ರೋ ಯೋಜನೆಗೆ ಡಿಪಿಆರ್ ಸಿದ್ಧಪಡಿಸುತ್ತಿದೆ.
ಕೊಚ್ಚಿ ಮಾದರಿಯಲ್ಲಿ ಮಂಗಳೂರು ನಗರವನ್ನು ನೇತ್ರಾವತಿ ಮತ್ತು ಫಲ್ಗುಣಿ ನದಿಗಳು ಸುತ್ತುವರಿದು ಹರಿಯುತ್ತಿರುವುದರಿಂದ ಇದೇ ಮಾರ್ಗದಲ್ಲಿ ವಾಟರ್ ಮೆಟ್ರೋ ಚಾಲ್ತಿಗೆ ತರಲು ಯೋಜನೆ ಹಾಕಲಾಗಿದೆ. ರಾಷ್ಟ್ರೀಯ ಜಲಸಾರಿಗೆ ಯೋಜನೆಯಡಿ ನೇತ್ರಾವತಿಯ ಬಜಾಲ್ ನಿಂದ ಫಲ್ಗುಣಿ ನದಿ ಮೂಲಕ ಮರವೂರು, ಗುರುಪುರದ ವರೆಗೆ ಮೆಟ್ರೋ ಸಾರಿಗೆ ತರುವುದಕ್ಕೆ ರಾಜ್ಯ ಸರಕಾರ ಯೋಜನೆ ಹಾಕಿದೆ.
ನೇತ್ರಾವತಿಯಿಂದ ಫಲ್ಗುಣಿ ನದಿಯ ಮರವೂರು ವರೆಗೆ 30 ಕಿಮೀ ಉದ್ದವಿದ್ದು, ಸಮುದ್ರ ಹಿನ್ನೀರಿನಿಂದಾಗಿ (ಬ್ಯಾಕ್ ವಾಟರ್) ವರ್ಷಪೂರ್ತಿ ನೀರು ಇರುತ್ತದೆ. ಹೀಗಾಗಿ ಬಜಾಲ್ ನಿಂದ ತೊಡಗಿ ನೇತ್ರಾವತಿ ನದಿಯಾಗಿ ಬೆಂಗ್ರೆ, ಅಳಿವೆಬಾಗಿಲು, ಬೋಳೂರು, ಸುಲ್ತಾನ್ ಬತ್ತೇರಿ, ಕುಳೂರು, ಮರವೂರು, ಗುರುಪುರ ವರೆಗೆ ಇಡೀ ಮಂಗಳೂರು ನಗರವನ್ನು ಸುತ್ತು ಹಾಕುವಂತೆ ಜಲಸಾರಿಗೆ ತರುವುದಕ್ಕೆ ಪ್ರಸ್ತಾಪ ಮಾಡಲಾಗಿದೆ. ಇದರ ನಡುವೆ 17 ಕಡೆ ಮೆಟ್ರೋ ಸ್ಟೇಶನ್ ಮಾದರಿಯಲ್ಲಿ ಬೋಟಿನಿಂದ ಇಳಿಯಲು ಮತ್ತು ಹತ್ತುವುದಕ್ಕೆ ಹಾದಿಯುದ್ದಕ್ಕೂ ನಿಲ್ದಾಣ ಇರಲಿದೆ.
ಕೊಚ್ಚಿಯ ಬಳಿಕ ಮಂಗಳೂರಿನಲ್ಲಿ ದೇಶದ ಎರಡನೇ ವಾಟರ್ ಮೆಟ್ರೋ ಸಾರಿಗೆ ತರಲು ಯೋಜನೆ ಹಾಕಿದ್ದು, ಆಮೂಲಕ ಐತಿಹಾಸಿಕ ನಗರಿಯ ಅಭಿವೃದ್ಧಿ ಮತ್ತು ಹೊಸ ಸಾಧ್ಯತೆಗಳಿಗೆ ಹಾದಿ ತೆರೆದುಕೊಳ್ಳಲಿದೆ. ಇದರಿಂದ ಪ್ರವಾಸೋದ್ಯಮ ಮತ್ತು ಜನರ ಜೀವನ ಮಟ್ಟವೂ ಸುಧಾರಣೆಯಾಗಲಿದೆ ಎಂದು ಕರ್ನಾಟಕ ಮಾರಿಟೈಮ್ ಬೋರ್ಡ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಜಲ ಸಾರಿಗೆಯು ಪ್ರಕೃತಿ ಸ್ನೇಹಿಯಾಗಿದ್ದು, ಪರಿಸರ ಮಾಲಿನ್ಯಕ್ಕೆ ಅವಕಾಶ ಇರುವುದಿಲ್ಲ. ಆಧುನಿಕ ಮಾದರಿಯಲ್ಲಿ ಇಲೆಕ್ಟ್ರಿಕ್ ಬೋಟ್ ಗಳನ್ನು ಸಾರಿಗೆ ಉದ್ದೇಶಕ್ಕೆ ಬಳಸಲಾಗುವುದು ಎಂದಿದ್ದಾರೆ.
2024-25ನೇ ಸಾಲಿನ ಕರ್ನಾಟಕ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನ ಗುರುಪುರ- ನೇತ್ರಾವತಿ ಮಧ್ಯೆ ಜಲಸಾರಿಗೆ ಏರ್ಪಡಿಸುವಲ್ಲಿ ಸಾಧ್ಯತಾ ವರದಿಯನ್ನು ಕೇಳಿರುವುದಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ಪೂರಕವಾಗಿ ಮಾರಿಟೈಮ್ ಬೋರ್ಡ್, ಜಲಸಾರಿಗೆ ತರುವುದಕ್ಕೆ ಡಿಪಿಆರ್ ಮಾಡುತ್ತಿರುವುದಾಗಿ ಮಾಹಿತಿ ನೀಡಿರುವುದು ಕುತೂಹಲ ಮೂಡಿಸಿದೆ. ಇತ್ತೀಚೆಗೆ ಮಾರಿಟೈಮ್ ಬೋರ್ಡ್ ವತಿಯಿಂದ ಡಿಪಿಆರ್ ತಯಾರಿಸಲು ಟೆಂಡರ್ ಕರೆಯಲಾಗಿದ್ದು, ಅದರಲ್ಲಿ ಮೂಲಸೌಕರ್ಯ, ವಾಟರ್ ಟ್ಯಾಕ್ಸಿ ಬಗ್ಗೆ ರೂಪುರೇಷೆ, ಹಣಕಾಸು ಅಗತ್ಯಗಳು, ಪ್ರಾಜೆಕ್ಟ್ ಸ್ವರೂಪದ ಬಗ್ಗೆ ಮಾಹಿತಿ ಕೇಳಲಾಗಿದೆ. ಅಲ್ಲದೆ, ಮಂಗಳೂರಿನಲ್ಲಿ ಜಲಸಾರಿಗೆಯಿಂದ ಜನರಿಗೆ ಸಿಗಬಹುದಾದ ಪ್ರಯೋಜನಗಳು, ಎದುರಾಗುವ ಸವಾಲುಗಳು, ಅದಕ್ಕೆ ಬೇಕಾದ ಸಂಪನ್ಮೂಲಗಳು ಮತ್ತು ಯಶಸ್ಸಿಗೆ ಬೇಕಾದ ಸೂತ್ರಗಳ ಬಗ್ಗೆಯೂ ಡಿಪಿಆರ್ ನಲ್ಲಿ ಮಾಹಿತಿ ಒಳಗೊಳ್ಳಲಿದೆ.
ಇದಲ್ಲದೆ, ವಾಟರ್ ಮೆಟ್ರೋ ಸ್ಟೇಶನ್ ಸ್ಥಾಪನೆಗೆ ಬೇಕಾದ ಜಾಗ, ಜನರ ಸಂಚಾರಕ್ಕೆ ಅಗತ್ಯ ಇದೆಯೇ ಎನ್ನುವ ಕುರಿತು ಸರ್ವೆಯನ್ನೂ ಒಳಗೊಂಡಿರಲಿದೆ. ವಾಟರ್ ಮೆಟ್ರೋ ಸಾರಿಗೆಯಿಂದ ಮಂಗಳೂರಿನ ಹಳೆ ಮೀನುಗಾರಿಕಾ ಬಂದರು ದಕ್ಕೆಯಲ್ಲಿ ಅತಿಯಾದ ದಟ್ಟಣೆ ತಪ್ಪಲಿದೆ. ಅಲ್ಲದೆ, ಸರಕು ಸಾಗಣೆಗಾಗಿ ರೋ-ರೋ ಸೇವೆಗಳನ್ನು ಬಳಸಿಕೊಳ್ಳಲು ಅವಕಾಶ ಸಿಗಲಿದೆ ಎನ್ನುವ ಲೆಕ್ಕಾಚಾರ ಇದೆ. ಪ್ರಯಾಣಿಕ ಸೇವೆ ಮಾದರಿಯಲ್ಲೇ ಸರಕು ಸಾಗಣೆಯ ಉದ್ದೇಶಕ್ಕೂ ಜಲಸಾರಿಗೆಯನ್ನು ಬಳಕೆಕೊಳ್ಳುವ ಬಗ್ಗೆ ಚಿಂತನೆಗಳಿವೆ. ಮುಂದಿನ 25 ವರ್ಷಗಳಲ್ಲಿ ನಗರದ ಬೆಳವಣಿಗೆಯ ಸಾಧ್ಯತೆ ಮತ್ತು ಬೇಡಿಕೆ ಆಧರಿಸಿ ಎಲ್ಲಿ ಮೆಟ್ರೋ ಸ್ಟೇಶನ್ ಮಾಡಿದರೆ ಒಳಿತು ಹಾಗೂ ಯಾವ ಪ್ರಾಜೆಕ್ಟ್ ಹತ್ತಿರ ಇದೆ ಎನ್ನುವ ಬಗ್ಗೆಯೂ ಸರ್ವೆ ನಡೆಯಲಿದೆ.
ದೇಶದ ಮೊದಲ ವಾಟರ್ ಮೆಟ್ರೋ ಕೊಚ್ಚಿ
ಕೊಚ್ಚಿ ವಾಟರ್ ಮೆಟ್ರೋ ಪ್ರಾಜೆಕ್ಟ್ ದೇಶದ ಮೊದಲ ವಾಟರ್ ಮೆಟ್ರೋ ಸೇವೆಯಾಗಿದ್ದು, 2023ರ ಎಪ್ರಿಲ್ 25ರಂದು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದ್ದರು. ಕೊಚ್ಚಿ ಜಲಸಾರಿಗೆಯಲ್ಲಿ 78 ಬೋಟ್, ವಾಟರ್ ಮೆಟ್ರೋ ಟರ್ಮಿನಲ್ ಒಳಗೊಂಡ 38 ಜೆಟ್ಟಿಗಳು ಇರಲಿದ್ದು, ಕೊಚ್ಚಿಯನ್ನು ಆವರಿಸಿರುವ ವೆಂಬನಾಡ್ ಸರೋವರದಲ್ಲಿ ಬರುವ 10 ದ್ವೀಪಗಳನ್ನು ಕನೆಕ್ಟ್ ಮಾಡಲಿದ್ದು, ಒಟ್ಟು 76 ಕಿಮೀ ಉದ್ದಕ್ಕೆ ಸಂಚರಿಸಲು ಅವಕಾಶ ಇದೆ. ಸಂಪೂರ್ಣ ಏರ್ ಕಂಡೀಶನ್ ಇರುವ ಈ ಮೆಟ್ರೋ ಸಾರಿಗೆಯು ಕೊಚ್ಚಿ ಮೆಟ್ರೋ ರೈಲು ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದು, ಬಸ್ ಟರ್ಮಿನಲ್, ಮೆಟ್ರೋ ನೆಟ್ವರ್ಕ್ ಮತ್ತು ರೈಲ್ವೇ ಜೊತೆಗೆ ಕನೆಕ್ಟ್ ಆಗುವಂತಿದೆ. ಕೊಚ್ಚಿ ವಾಟರ್ ಮೆಟ್ರೋದಲ್ಲಿ 100 ಮತ್ತು 50 ಜನರ ಸಾಮರ್ಥ್ಯದ ಎರಡು ಮಾದರಿಯ ಪ್ಯಾಸೆಂಜರ್ ಬೋಟ್ ಏರ್ಪಡಿಸಲಾಗಿದೆ.
2024ರ ಜನವರಿಯಲ್ಲಿ ಪ್ರಧಾನಿ ಮೋದಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜಾರಿಗೆ ತಂದ 14 ಕಿಮೀ ಉದ್ದದ ವಾಟರ್ ಮೆಟ್ರೋ ಸಾರಿಗೆಯನ್ನು ವರ್ಚುವಲ್ ಆಗಿ ಉದ್ಘಾಟಿಸಿದ್ದರು. ಸರಯೂ ನದಿಯಲ್ಲಿ ವಾಟರ್ ಮೆಟ್ರೋ ಚಲಿಸಲಿದ್ದು, ಅಯೋಧ್ಯೆ ಮತ್ತು ಗುಪ್ತಹರ್ ಘಾಟ್ ನಡುವೆ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳನ್ನು ಒಯ್ಯಲು ಬಳಕೆಯಾಗುತ್ತಿದೆ.
ಕೇರಳದ ಕೊಚ್ಚಿ ಮಾದರಿಯಲ್ಲಿ ಕರ್ನಾಟಕದ ಕರಾವಳಿ ನಗರ ಮಂಗಳೂರಿಗೆ ವಾಟರ್ ಮೆಟ್ರೋ ಸಿಗುವ ಸಾಧ್ಯತೆ ಇದೆ. ಸಮಗ್ರ ಜಲ ಸಾರಿಗೆ ವ್ಯವಸ್ಥೆಯ ಮೂಲಕ ಪ್ರತ್ಯೇಕ ಪ್ರದೇಶಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿರುವ ಮಂಗಳೂರು ವಾಟರ್ ಮೆಟ್ರೋ ಯೋಜನೆ (MWMP) ಗಾಗಿ ವಿವರವಾದ ಯೋಜನಾ ವರದಿಯನ್ನು (DPR) ತಯಾರಿಸಲು ಕರ್ನಾಟಕ ಕಡಲ ಮಂಡಳಿ (KMB) ನಿರ್ಧರಿಸಿದೆ.