ಕರ್ನಾಟಕ ಜಲಸಾರಿಗೆ ಮಂಡಳಿಯ ಸನ್ಮಾನ್ಯ ಅಧ್ಯಕ್ಷರು, ಕರ್ನಾಟಕ ಜಲಸಾರಿಗೆ ಮಂಡಳಿ ಹಾಗೂ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಮತ್ತು ಸನ್ಮಾನ್ಯ ಉಪಾಧ್ಯಕ್ಷರು ಕರ್ನಾಟಕ ಜಲಸಾರಿಗೆ ಮಂಡಳಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವರುಗಳ ನಾಯಕತ್ವದಲ್ಲಿ ಮುನ್ನಡೆಯುತ್ತಿದೆ.
ಮಂಡಳಿಯ 10ನೇ ಸಭೆಯನ್ನು ದಿನಾಂಕ: 16.01.2024 ರಂದು ಸಾಯಂಕಾಲ 5:00 ಗಂಟೆಗೆ ʼಕೃಷ್ಣಾʼ ಸನ್ಮಾನ್ಯ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಜರುಗಿತು. ಶ್ರೀ ಜಯರಾಮ್ ರಾಯಪುರ, ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮಂಡಳಿಯ ಸದಸ್ಯರುಗಳನ್ನು ಸ್ವಾಗತಿಸುತ್ತಾ, ಸಭೆಯ ಕಾರ್ಯಸೂಚಿಗಳನ್ನು ಸಭೆಯ ಅವಗಾಹನೆಗೆ ಮಂಡಿಸಿದರು.
ಕರ್ನಾಟಕ ಜಲಸಾರಿಗೆ ಮಂಡಳಿಯು ವಿವಿಧ ಬಂದರುಗಳ ಉನ್ನತೀಕರಣ, ನಿರ್ವಹಣೆ ಹಾಗೂ ಆಧುನೀಕರಿಸುವ ಬಗ್ಗೆ ಬರುವ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುಲು ಉದ್ದೇಶಿಸಿದೆ. ಅಲ್ಲದೇ ಮಂಡಳಿಯು ಪ್ರವಾಸೋದ್ಯಮವನ್ನು ಉತ್ತೇಜಿಸಲು ವಿಹಾರನೌಕಾಯಾನ ಹಾಗೂ ರಾಜ್ಯದ ಒಳನಾಡು ಜಲಸಾರಿಗೆಯನ್ನು ಅಭಿವೃದ್ಧಿಪಡಿಸಲು ಬೇಕಾಗುವ ಪೂರಕ ಮೂಲಭೂತ ಸೌಕರ್ಯಗಳ ನಿರ್ಮಾಣದ ಕಡೆಗೆ ಹೆಚ್ಚಿನ ಗಮನ ಹರಿಸಲಿದೆ ಹಾಗೂ ಮಂಗಳೂರಿನಲ್ಲಿ ನೌಕಾ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಯುವಜನರಲ್ಲಿ ಕೌಶಲ್ಯ ಪರಿಣಿತಿಯನ್ನು ಹೆಚ್ಚಿಸುವುದರ ಜೊತೆಗೆ ರಾಜ್ಯದಲ್ಲಿನ ನೌಕಾ ಉದ್ಯಮದಲ್ಲಿನ ಮಾನವ ಶಕ್ತಿಯ ಕೊರತೆಯನ್ನು ನೀಗಿಸಲು ಉದ್ದೇಶಿಸಲಾಗಿದೆ ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಿವರಿಸಿದರು.
ಬಂದರುಗಳು, ಹಡಗು ಮತ್ತು ಜಲಮಾರ್ಗ ಮಂತ್ರಾಲಯ, ಭಾರತ ಸರ್ಕಾರದ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು. ಸಾಗರಮಾಲಾ ಯೋಜನೆಯಡಿ ಮಂಜೂರಾದ 26 ಯೋಜನೆಗಳ ಪ್ರಸ್ತುತ ಹಂತದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಹಾಗೂ ಈ ಎಲ್ಲಾ ಯೋಜನೆಗಳನ್ನು ತೀವ್ರಗತಿಯಲ್ಲಿ ಅನುಷ್ಠಾನಗೊಳಿಸಲು ಹಾಗೂ ಸಿ.ಆರ್.ಝಡ್ ಅನುಮತಿಯನ್ನು ಪಡೆಯುವ ಬಗ್ಗೆ ಅಗತ್ಯ ತುರ್ತು ಕ್ರಮವನ್ನು ರಾಜ್ಯ ಸರ್ಕಾರವು ಕೈಗೊಳ್ಳುತ್ತದೆ.
ಕರ್ನಾಟಕ ಜಲಸಾರಿಗೆ ಮಂಡಳಿಯು ಸನ್ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಬಜೆಟ್‌ನಲ್ಲಿ ಘೋಷಿಸುವ ಯೋಜನೆ ಹಾಗೂ ಕಾರ್ಯಕ್ರಮಗಳ ಬಗ್ಗೆ ಸರಿಯಾದ ಸಮಯಕ್ಕೆ ಕೈಗೊಳ್ಳುತ್ತಿರುವ ಕ್ರಮದ ಬಗ್ಗೆ ಸಭೆಯಲ್ಲಿ ಪ್ರಶಂಸಿಸಲಾಯಿತು.
ಮಂಡಳಿಯ ಸಭೆಯನ್ನು ಸನ್ಮಾನ್ಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳನ್ನು ವಂದಿಸುವುದರೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.